##ಅಗ್ನಿಶಾಸನ
ಪರಮ ಪ್ರಾಚೀನನೂ ಮಹಾಮಹಿಮನೂ ಆದ ದೇವರ ಹೆಸರಿನಲ್ಲಿ.
ನಿಶ್ಚಯವಾಗಿಯೂ ಅಗಲಿಕೆಯ ಅಗ್ನಿಯಲ್ಲಿ ನಿಷ್ಠಾವಂತರ ಹೃದಯಗಳು ಧಗಧಗಿಸಿವೆ
ಎಲ್ಲಿಹುದು ನಿನ್ನ ಮುಖಾರವಿಂದದ ಪ್ರಭೆ,
ಓ ಪ್ರಪಂಚಗಳ ಪ್ರಿಯತಮನೇ?
ನಿನ್ನ ಸಮೀಪದವರೆಲ್ಲಾ ಅವಶೇಷದ ಕತ್ತಲೆಯಲ್ಲಿ ಪರಿತ್ಯಕ್ತರಾಗಿಹರು:
ಎಲ್ಲಿಹುದು ಪುನರ್ಮಿಲನದ ಸುಪ್ರಭಾತದ ಕಾಂತಿ,
ಓ ಪ್ರಪಂಚಗಳ ಅಪೇಕ್ಷೆಯೇ?
ನಿನ್ನಿಂದ ಆರಿಸಲ್ಪಟ್ಟವರ ಶರೀರಗಳು ದೂರದ ಉಸುಕಿನಲ್ಲಿ ಕಂಪಿಸುತ್ತಾ ಬಿದ್ದಿವೆ; ಎಲ್ಲಿಹುದು ನಿನ್ನ ಉಪಸ್ಥಿತಿಯ ಸಾಗರ,
ಓ ಪ್ರಪಂಚಗಳ ಮೋಹಕನೇ?
ಹೆಬ್ಬಯಕೆಯ ಕೈಗಳು ನಿನ್ನ ಅನುಗ್ರಹ ಹಾಗೂ ಉದಾರತೆಯ ಸ್ವರ್ಗದೆಡೆ ಚಾಚಿಹವು;
ಎಲ್ಲಿಹುದು ನಿನ್ನ ಕೊಡುಗೆಯ ಸುರಿಮಳೆ,
ಓ ಪ್ರಪಂಚಗಳ ಹೊಣೆಗಾರನೇ?
ದೈವ ಪ್ರತಿಭಟಕರು ಎಲ್ಲೆಡೆಯಿಂದಲೂ ಪೀಡಿಸುತಿಹರು;
ಎಲ್ಲಿಹುದು ನಿನ್ನ ಆಜ್ಞಾಕಾರಕ ಲೇಖನಿಯ ನಿರ್ಬಂಧಕಶಕ್ತಿ
ಓ ಪ್ರಪಂಚಗಳ ಜಯಶಾಲಿಯೇ?
ಎಲ್ಲಾ ದಿಕ್ಕುಗಳಲ್ಲೂ ಶ್ವಾನಗಳ ಬೊಗಳಿಕೆಯು ಜೋರಾಗಿಹುದು;
ಎಲ್ಲಿಹನು ನಿನ್ನ ಪ್ರಾಕ್ರಮದ ಕಾಡಿನ ಮೃಗರಾಜ,
ಓ ಪ್ರಪಂಚಗಳ ಶಿಕ್ಷಿಸುವವನೇ?
ನಿರಾಸಕ್ತಿಯ ಚಳಿಯು ಮಾನವತೆಯನ್ನೆಲ್ಲಾ ಬಿಗಿಯಾಗಿ ಹಿಡಿದಿಹುದು:
ಎಲ್ಲಿಹುದು ನಿನ್ನ ಪ್ರೇಮದ ಶಾಖ,
ಓ ಪ್ರಪಂಚಗಳ ಅಗ್ನಿಯೇ? ದುರ್ದೆಶೆಯು ತುತ್ತ ತುದಿಗೇರಿಹುದು:
ಎಲ್ಲಿಹವು ನಿನ್ನ ನೆರವಿನ ಚಿಹ್ನೆಗಳು, ಓ ಪ್ರಪಂಚಗಳ ವಿಮೋಚಕನೇ?
ಅಂಧಕಾರವು, ಬಹಳಷ್ಟು ಜನರನ್ನೆಲ್ಲಾ ಆವರಿಸಿಹುದು;
ಎಲ್ಲಿಹುದು ನಿನ್ನ ವೈಭವದ ಕಾಂತಿ, ಓ ಪ್ರಪಂಚಗಳ ಪ್ರಭೆಯೇ?
ಮನುಷ್ಯರ ಕೊರಳುಗಳು ದ್ವೇಷದಿಂದ ಚಾಚಿಹವು:
ಎಲ್ಲಿಹವು ನಿನ್ನ ಪ್ರತೀಕಾರದ ಖಡ್ಗಗಳು, ಓ ಪ್ರಪಂಚಗಳ ವಿನಾಶಕನೇ?
ಅಪಮಾನವು ಪಾತಾಳವನ್ನು ಮುಟ್ಟಿಹುದು: ಎಲ್ಲಿಹವು ನಿನ್ನ ವೈಭವದ ಸಂಕೇತಗಳು,
ಓ ಪ್ರಪಂಚಗಳ ಮಹಿಮನೇ? ನಿನ್ನ ನಾಮವನ್ನು ಸಾಕ್ಷಾತ್ಕರಿಸಿದ ಸರ್ವಕೃಪಾಳುವನ್ನು
ದುಃಖಗಳು ಬಾಧಿಸಿಹವು:
ಎಲ್ಲಿಹುದು ನಿನ್ನ ಸಾಕ್ಷಾತ್ಕರಿತ ದಿನ ಚಿಲುಮೆಯ ಆನಂದ,
ಓ ಪ್ರಪಂಚಗಳ ಸಂತೋಷಕಾರಕನೇ?
ಸಂಕಟವು ಭೂಮಿಯ ಜನರನ್ನೆಲ್ಲಾ ಆವರಿಸಿಹುದು:
ಎಲ್ಲಿಹವು ನಿನ್ನ ಹರುಷದ ಲಾಂಛನಗಳು,
ಓ ಪ್ರಪಂಚಗಳ ಉಲ್ಲಾಸವೇ?
ನಿನ್ನ ಚಿಹ್ನೆಗಳ ಉದಯ ಸ್ಥಳವು ಅನಿಷ್ಟ ಸೂಚನೆಗಳಿಂದ
ಮುಚ್ಚಿರುವುದನ್ನು ನೀನು ನೋಡುತ್ತಿರುವೆ:
ಎಲ್ಲಿಹವು ನಿನ್ನ ಬಲಿಷ್ಠ ಬೆರಳುಗಳು,
ಓ ಪ್ರಪಂಚಗಳ ಶಕ್ತಿಯೇ?
ಭಯಂಕರ ದಾಹವು ಮನುಷ್ಯರನ್ನೆಲ್ಲಾ ಆವರಿಸಿಹುದು:
ಎಲ್ಲಿಹುದು ನಿನ್ನ ಅನುಗ್ರಹದ ನದಿ,
ಓ ಪ್ರಪಂಚಗಳ ಕರುಣೆಯೇ?
ದುರಾಶೆಯು ಮಾನವ ಜನಾಂಗವನ್ನೆಲ್ಲಾ ಬಂಧಿಸಿಹುದು:
ಎಲ್ಲಿಹವು ನಿನ್ನ ವಿರಕ್ತಿಯ ಸಶರೀರಗಳು,
ಓ ಪ್ರಪಂಚಗಳ ಪ್ರಭುವೇ?
ದಬ್ಬಾಳಿಕೆಗೊಳಪಟ್ಟಿ ಈತನು
ಒಬ್ಬಂಟಿಯಾಗಿರುವುದನ್ನು ನೀನು ನೋಡುತ್ತಿರುವೆ:
ಎಲ್ಲಿಹರು ನಿನ್ನ ಆಜ್ಞೆಯ ಸ್ವರ್ಗದ ಅತಿಥೇಯರು,
ಓ ಪ್ರಪಂಚಗಳ ಸಾರ್ವಭೌಮನೇ?
ಪರಸ್ಥಳದಲ್ಲಿ ಪರಿತ್ಯಜಿಸಲ್ಪಟ್ಟಿರುವೆ ನಾನು:
ಎಲ್ಲಿಹವು ನಿನ್ನ ನಿಷ್ಠೆಯ ಸಂಕೇತಗಳು,
ಓ ಪ್ರಪಂಚಗಳ ನಂಬಿಗಸ್ತನೇ?
ಮೃತ್ಯು –ವೇದನೆಗಳು ಮನುಜರನ್ನೆಲ್ಲಾ ಹಿಡಿದಿಹವು:
ಎಲ್ಲಿಹವು ನಿನ್ನ ಅಮರ ಜೀವನದ ಭೋರ್ಗರೆವ
ಮಹಾಸಾಗರದಲೆಗಳು
ಓ ಪ್ರಪಂಚಗಳ ಜೀವವೇ?
ಶೈತಾನನ ಪಿಸುಮಾತುಗಳು ಪ್ರತಿಯೊಂದು ಜೀವಿಯ ಮೇಲೂ ಪಿಸುಗುಟ್ಟಿವೆ:
ಎಲ್ಲಿಹುದು ನಿನ್ನ ಬೆಂಕಿಯ ಉಲ್ಕೆ,
ಓ ಪ್ರಪಂಚಗಳ ಬೆಳಕೇ?
ಉದ್ವೇಗದ ಅಮಲು ಹೆಚ್ಚಿನ ಮಾನವ ಜನಾಂಗವನ್ನೆಲ್ಲಾ
ದುರ್ಮಾರ್ಗಕ್ಕೆ ಒಯ್ದಿಹುದು:
ಎಲ್ಲಿಹವು ನಿನ್ನ ಪರಿಶುದ್ಧತೆಯ ದಿನ ಚಿಲುಮೆಗಳು,
ಓ ಪ್ರಪಂಚಗಳ ಅಭಿಲಾಷೆಯೇ?
ದಬ್ಬಾಳಿಕೆಗೊಳಪಟ್ಟ ಈತನು ಸಿರಿಯನ್ನರ ಮಧ್ಯೆ ಜುಲುಮೆಯಲ್ಲಿ ಮರೆಮಾಚಿರುವುದನ್ನು ನೀನು ನೋಡುತ್ತಿರುವೆ: ಎಲ್ಲಿಹುದು ನಿನ್ನ ಮುಂಬೆಳಗಿನ ತೇಜಸ್ಸು, ಓ ಪ್ರಪಂಚಗಳ ಬೆಳಕೇ? ನಾನು ಮಾತನಾಡಲು ನಿಷೇಧಿಸಲ್ಪಟ್ಟಿರುವುದನ್ನು ನೀನು ನೋಡುತ್ತಿರುವೆ: ಎಲ್ಲಿಂದ ಪುಟಿಯುವುದು ನಿನ್ನ ಶ್ರುತಿ, ಓ ಪ್ರಪಂಚಗಳ ಕೋಗಿಲೆಯೇ? ಬಹಳಷ್ಟು ಜನ ಭ್ರಾಂತಿ ಹಾಗೂ ವ್ಯರ್ಥ ಕಲ್ಪನೆಯಲ್ಲಿ ಸುತ್ತುವರಿದಿಹರು: ಎಲ್ಲಿಹರು ನಿನ್ನ ನಿಶ್ಚಯತೆಯ ಪ್ರತಿಪಾದಕರು, ಓ ಪ್ರಪಂಚಗಳ ಭರವಸಿಗನೇ? ಯಾತನೆಗಳ ಸಾಗರದಲ್ಲಿ ಮುಳುಗುತ್ತಿಹರು ಬಹಾ: ಎಲ್ಲಿಹುದು ನಿನ್ನ ವಿಮುಕ್ತಿಯ ನೌಕೆ, ಓ ಪ್ರಪಂಚಗಳ ಉದ್ಧಾರಕನೇ? ನಿನ್ನ ವಾಣಿಯ ದಿನ ಚಿಲುಮೆಯು ಸೃಷ್ಟಿಯ ಕಾರ್ಗತ್ತಲಲ್ಲಿರುವುದನ್ನು ನೀನು ನೋಡುತ್ತಿರುವೆ: ಎಲ್ಲಿಹನು ನಿನ್ನ ದಿವ್ಯಾನುಗ್ರಹದ ಸೂರ್ಯ, ಓ ಪ್ರಪಂಚಗಳ ಬೆಳಕುಗಾರನೇ? ಸತ್ಯ ಹಾಗೂ ಪರಿಶುದ್ಧತೆ, ನಿಷ್ಠೆ ಹಾಗೂ ಸನ್ಮಾನದ ದೀಪಗಳ ನಂದಿಸಲ್ಪಟ್ಟಿವೆ: ಎಲ್ಲಿಹುದು ನಿನ್ನ ಸೇಡು ಭರಿತ ಕ್ರೋಧದ ಸುಳಿವು, ಓ ಪ್ರಪಂಚಗಳ ಸಾರಥಿಯೇ? ನಿನಗಾಗಿ ವೀರರಾದವರನ್ನು ಯಾರನ್ನಾದರೂ, ಅಥವಾ ನಿನ್ನ ಪ್ರೀತಿಯ ಪಥದಲ್ಲಿ ಸಂಭವಿಸಿರುವುದರ ಬಗ್ಗೆ ಚಿಂತಿಸುವವರನ್ನಾದರೂ ನೀನು ಕಾಣಬಲ್ಲೆಯಾ? ಈಗ ನನ್ನ ಲೇಖನಿಯು ಸ್ತಬ್ಧವಾಗುತ್ತಿಹುದು, ಓ ಪ್ರಪಂಚಗಳ ಪ್ರಿಯಕರನೇ, ದಿವ್ಯ ಕಲ್ಪವೃಕ್ಶದ ಕೊಂಬೆಗಳು ವಿಧಿಯ ಚಂಡಮಾರುತಗಳಿಗೆ ಸಿಕ್ಕಿ ಮುರಿದು ಹೋಗಿಹವು: ಎಲ್ಲಿಹುದು ನಿನ್ನ ಪೋಷಣೆಯ ನಿಶಾನೆ ಓ ಪ್ರಪಂಚಗಳ ವೀರಾಗ್ರೇಸರನೇ? ಈ ಮುಖವು ನಿಂದೆಯ ಧೂಳಿನಲ್ಲಿ ಅಡಗಿ ಹೋಗಿಹುದು: ಎಲ್ಲಿಹುದು ನಿನ್ನ್ ಅನುಕಂಪದ ತಂಗಾಳಿ, ಓ ಪ್ರಪಂಚಗಳ ಕರುಣಾಳೇ? ಪವಿತ್ರತೆಯ ನಿಲುವಂಗಿಯು ಕಪಟಿಗಳಿಂದ ಮೈಲಿಗೆಯಾಗಿಹುದು ಎಲ್ಲಿಹುದು ನಿನ್ನ ಮಡಿಯಾದ ವಸ್ತ್ರ, ಓ ಪ್ರಪಂಚಗಳ ಶೃಂಗಾರಕನೇ? ಮನುಷ್ಯರ ಕೃತ್ಯಗಳಿಂದಾಗಿ ಅನುಗ್ರಹದ ಸಮುದ್ರವು ಸ್ತಬ್ಧವಾಗಿಹುದು: ಎಲ್ಲಿಹವು ನಿನ್ನ ಔದಾರ್ಯದ ಅಲೆಗಳು, ಓ ಪ್ರಪಂಚಗಳ ಆಕಾಂಕ್ಷೆಯೇ? ನಿನ್ನ ದಿವ್ಯ ಸಾನ್ನಿಧ್ಯಕ್ಕೊಯ್ಯುವ ದ್ವಾರವು ಶತ್ರುಗಳ ಷಡ್ಯಂತ್ರ ದಿಂದಾಗಿ ಮುಚ್ಚಿಹುದು: ಎಲ್ಲಿಹವು ನಿನ್ನ ಕೊಡುಗೈಯ ಚಾವಿ, ಓ ಪ್ರಪಂಚಗಳ ಕೀಲಿಕಾರಕನೇ? ವಿದ್ರೋಹದ ವಿಷಪೂರಿತ ಗಾಳಿಯಿಂದಾಗಿ ಎಲೆಗಳು ಹಳದಿಯಾಗಿಹವು: ಎಲ್ಲಿಹುದು ನಿನ್ನ ಔದಾರ್ಯದ ಮೇಘಧಾರೆ, ಓ ಪ್ರಪಂಚಗಳ ದಾತನೇ? ಈ ವಿಶ್ವವು ಪಾಪದ ಧೂಳಿನಿಂದ ಅಂಧಕಾರಮಯವಾಗಿಹುದು: ಎಲ್ಲಿಹುದು ನಿನ್ನ ಕ್ಷಮೆಯ ತಂಗಾಳಿ, ಓ ಪ್ರಪಂಚಗಳ ಕ್ಷಮಾದಾತನೇ? ನಿರ್ಜನ ಸ್ಥಳದಲ್ಲಿ ಈ ಯುವಕನು ಏಕಾಂಗಿಯಾಗಿಹನು: ಎಲ್ಲಿಹುದು ನಿನ್ನ ದಿವ್ಯಾನುಗ್ರಹದ ಮಳೆ, ಓ ಪ್ರಪಂಚಗಳ ಕೊಡುಗೈ ದೊರೆಯೇ? ಓ ಪರಮ ಶ್ರೇಷ್ಠ ಲೇಖನಿಯೇ, ಅಮರ ರಾಜ್ಯದಲ್ಲಿ ಅತ್ಯಂತ ಸುಮಧುರವಾದ ನಿನ್ನ ಕರೆಯನ್ನು ನಾವು ಆಲಿಸಿಹೆವು ವೈಭವಯುಕ್ತವಾದ ನಾಲಿಗೆಯ ನುಡಿಗೆ ನೀನು ಕಿವಿಗೊಡು, ಓ ಪ್ರಪಂಚಗಳಲ್ಲಿ ದಬ್ಬಾಳಿಕೆಗೊಳಪಟ್ಟವನೇ! ಚಳಿಯಿಂದಲ್ಲದಿರೆ ನಿನ್ನ ನುಡಿಗಳ ಶಾಖವು ಹೇಗೆ ವಿರಾಜಿಸುತ್ತಿತ್ತು, ಓ ಪ್ರಪಂಚಗಳ ವ್ಯಾಖ್ಯಾಕಾರನೇ? ವಿಪತ್ತುಗಳಿಂದಲ್ಲದಿರೆ ನಿನ್ನ ಸಹನೆಯ ಸೂರ್ಯನು ಹೇಗೆ ಪ್ರಕಾಶಿಸುವನು. ಓ ಪ್ರಪಂಚಗಳ ಬೆಳಕೇ? ಗೋಳಾಡದಿರು ದುಷ್ಟರಿಂದಾಗಿ, ಸಹಿಸಲು ಮತ್ತು ತಾಳ್ಮೆಯಿಂದಿರಲು ನೀನು ಸೃಷ್ಟಿಸಲ್ಪಟ್ಟಿದ್ದಿಯೇ, ಓ ಪ್ರಪಂಚಗಳ ಸಹನಾಶೀಲನೇ. ದ್ರೋಹಿಗಳ ಮಧ್ಯೆ ಒಡಂಬಡಿಕೆಯ ದಿಗಂತದಲ್ಲಿನ ನಿನ್ನ ಉದಯ ಹಾಗೂ ದೇವರಿಗಾಗಿ ನಿನ್ನ ಹಂಬಲಿಕೆ ಎಷ್ಟು ಮನೋಹರವಾಗಿತ್ತು. ಓ ಪ್ರಪಂಚಗಳ ಪ್ರೇಮವೇ? ಸ್ವಾತಂತ್ರ್ಯದ ಪತಾಕೆ ಉನ್ನತ ಶಿಖರದ ತುತ್ತತುದಿಯಲ್ಲಿ ನಿನ್ನಿಂದಲೇ ನೆಡಲಾಗಿತ್ತು ಮತ್ತು ಅನುಗ್ರಹದ ಸಮುದ್ರವು ಭೋರ್ಗರೆದಿತ್ತು. ಓ ಪ್ರಪಂಚಗಳ ಆನಂದ ಪರವಶನೇ ನಿನ್ನ ಒಂಟಿತನದಿಂದಲೇ ಐಕ್ಯತೆಯ ಸೂರ್ಯ ಬೆಳಗಿಹನು, ಹಾಗೂ ನಿನ್ನ ಗಡೀಪಾರಿನಿಂದಲೇ ಐಕ್ಯತೆಯ ಭೂಮಿಯು ಅಲಂಕೃತಗೊಂಡಿಹುದು ಸಹನೆಯಿಂದಿರು ಓ ಪ್ರಪಂಚಗಳ ದೇಶಭ್ರಷ್ಟನೇ, ನಾವು ಅಪಮಾನವನ್ನು ವೈಭವದ ಉಡುಗೆಯನ್ನಾಗಿಸಿಹೆವು ಹಾಗೂ ವ್ಯಥೆಯನ್ನು ನಿನ್ನ ದೇಗುಲದ ಭೂಷಣವನ್ನಾಗಿಸಿಹೆವು ಓ ಪ್ರಪಂಚಗಳ ಪ್ರತಿಷ್ಠೆಯೇ. ಹೃದಯಗಳು ದ್ವೇಷಗಳಿಂದ ತುಂಬಿರುವುದನ್ನೂ ನೀನು ನೋಡುತ್ತಿರುವೆ ಮತ್ತು ಅವುಗಳನ್ನು ಲಕ್ಷಿಸದಿರುವುದು ನಿನಗೆ ಸೇರಿಹುದು, ಓ ಪ್ರಪಂಚಗಳ ಪಾಪಗಳನ್ನು ಮರೆಮಾಚುವವನೇ. ಖಡ್ಗಗಳು ಥಳಥಳಿಸಿದಾಗ ಮುನ್ನುಗ್ಗು! ಈಟಿಗಳು ಹಾರಿದಾಗ ಮುಂದಕ್ಕೆ ಹೋಗು! ಓ ಪ್ರಪಂಚಗಳ ತ್ಯಾಗಮಯಿಯೇ, ನೀನು ರೋದಿಸುವೆಯಾ, ಅಥವಾ ನಾನು ರೋದಿಸಲೇ? ಇಲ್ಲಾ, ನಿನ್ನ ಕೆಲವೇ ಕೆಲವು ಮುಂದಾಳುಗಳನ್ನು ಕಂಡು ನಾನು ಗೋಳಾಡಲೇ, ಓ ಪ್ರಪಂಚಗಳ ರೋದನೆಯ ಕಾರಣ ಕರ್ತನೇ? ನಿಶ್ಚಯವಾಗಿಯೂ ನಾನು ನಿನ್ನ ಕರೆಯನ್ನು ಆಲಿಸಿರುವೆ, ಓ ವೈಭವೋಪೇತ ಪ್ರಿಯತಮನೇ ಮತ್ತು ಬಹಾರ ಮುಖಾರವಿಂದವು ಈ ಗ ಕಷ್ಟಗಳ ಶಾಖದಿಂದ ಮತ್ತು ನಿನ್ನ ಪ್ರಕಾಶಮಾನವಾದ ನುಡಿಗಳ ಜ್ವಾಲೆಗಳಿಂದ ಉರಿಯುತ್ತಿದೆ ಮತ್ತು ಆತನು ಅಹುತಿಯ ಸ್ಥಾನದಲ್ಲಿ ನಿಷ್ಠೆಯಿಂದ ಎದ್ದು ನಿನ್ನ ಇಚ್ಛೆಯ ಕಡೆ ನೋಡುತಿಹನು, ಓ ಪ್ರಪಂಚಗಳ ಆಜ್ಝಾಕಾರಕನೇ, ಓ ಅಲಿ ಅಕ್ಬರ್, ಈ ಶಾಸನದಲ್ಲಿ ನೀನು ನಿನ್ನ ಪ್ರಭುವನ್ನು ವಂದಿಸು, ಅದರಿಂದ ನೀನು ನಿನ್ನ ಸೌಮ್ಯತೆಯ ಸುವಾಸನೆಯನ್ನು ಆಘ್ರಾಣಿಸಬಹುದು ಹಾಗೂ ಸಕಲ ಲೋಕಗಳ ಪೂಜ್ಯನಾದ ದೇವರ ಪಥದಲ್ಲಿ ಎಂಥ ಕಷ್ಟಗಳು ನಮ್ಮನ್ನಾವರಿಸಿರಬಹುದೆಂದು ತಿಳಿಯಬಹುದು. ಸೇವಕರೆಲ್ಲಾ ಇದನ್ನು ಪಠಿಸಿ, ವಿಚಾರ ಮಾಡಿದ್ದೇ ಆದರೆ, ಸರ್ವಲೋಕಗಳನ್ನೇ ಹತ್ತಿ ಉರಿಸುವಂತಹ ಅಗ್ನಿಯು ಅವರ ನರನಾಡಿಗಳಲ್ಲಿ ಹೊತ್ತಿಸಲಾಗುವುದು.